Sunday, December 7, 2008

ಮಂಡ್ಯ ಟು ದುಬೈ

"ಹರೀಶ್ ಗೆ ದುಬೈನಲ್ಲಿ ಕೆಲಸ ಸಿಕ್ಕಿದೆಯಂತೆ. ಅದಕ್ಕೆ ಹೋಗು ಅಂಥ ನೀನೂ ಹೇಳು ಗುರುವೇ.."
ಹುಣಸೂರಿನಿಂದ ಗೆಳೆಯ ರವಿ ಫೋನ್ ಮಾಡಿ ಹಾಗಂದ. ನನಗೆ ತುಂಬಾ ಖುಷಿಯಾಯಿತು. ಎಲ್ಲಿಯ ಮಂಡ್ಯ, ಎಲ್ಲಿಯ ದುಬೈ? ಅಂತೂ ಹರೀಶ್ ಅವರ ಕಷ್ಟದ ದಿನಗಳು ಮುಗಿಯುವ ಕಾಲ ಬಂತಲ್ಲಾ ಎಂದು ಸಂಭ್ರಮಿಸಿದೆ. ಮುಂದಿನ ಸಾರಿ ಮಂಡ್ಯಕ್ಕೆ ಹೋದಾಗ ಅವರನ್ನು ಭೇಟಿ ಮಾಡಿಯೇ ತೀರಬೇಕು ಎಂದು ನಿರ್ಧರಿಸಿದೆ. ಅವರನ್ನು ಭೇಟಿ ಮಾಡಿ ಮಾತನಾಡಿಯೂ ಬಂದೆ.

ಭೇಟಿಯ ವಿವರಗಳನ್ನು ಹೇಳುವ ಮೊದಲು ನಿಮಗೆ ಹರೀಶ್, ರವಿ ಯಾರೆಂದು ಹೇಳಬೇಕು.

ನನ್ನ ಹುಟ್ಟೂರು ಮಂಡ್ಯದಲ್ಲಿ "ಉದಯಕಾಲ" ಎಂಬ ಪತ್ರಿಕೆಯಿದೆ. ಈಗ ಅದರ ಮಾಲೀಕರು ಒಬ್ಬ ಹೋಟೆಲ್ ಉದ್ಯಮಿ. ಆ ಪತ್ರಿಕೆ ಸ್ಥಾಪಿಸಿದವರು ಎಚ್.ಎಲ್. ಕೇಶವಮೂರ್ತಿ. ಅವರು ಲಂಕೇಶ್ ಪತ್ರಿಕೆಯ ಅಂಕಣಕಾರರು. ಕೆಲ ವರ್ಷ ಅವರ ಸಂಪಾದಕತ್ವದಲ್ಲಿ ಪತ್ರಿಕೆ ಚೆನ್ನಾಗಿ ಮೂಡಿ ಬರುತ್ತಿತ್ತು. ಅನಿವಾರ್ಯ ಕಾರಣಗಳಿಂದ ಅವರು ಪತ್ರಿಕೆಯನ್ನು ಮಾರಿದರು. ಆಗ ಅದನ್ನು ಕೊಂಡುಕೊಂಡವರು ಮಂಡ್ಯದಲ್ಲಿ "ರೌಡಿಗಳ ಬಾಸ್" ಆಗಿದ್ದ ಎಸ್.ಕೆ. ರಾಮಣ್ಣ.

ಆ ಪತ್ರಿಕೆಯಲ್ಲಿ ಹರೀಶ್ ಕಂಪ್ಯೂಟರ್ ಆಪರೇಟರ್ ಆಗಿದ್ದರು. ಅಲ್ಲಿಗೆ ಕೆಲಸಕ್ಕೆ ಸೇರಿದಾಗ ನನಗೆ ಅವರ ಪರಿಚಯವಾಯಿತು. ಕೆಲಸದ ವಿಷಯದಲ್ಲಿ ನನಗೆ ಏನೂ ಗೊತ್ತಿರಲಿಲ್ಲ. ಹರೀಶ್ ಅವರ ವಿಶೇಷ ಏನೂ ಅಂದರೆ, ಅವರು ಕೋಪ ಮಾಡಿಕೊಳ್ಳುವುದಿಲ್ಲ. ಕಂಪ್ಯೂಟರ್ ವಿಷಯದಲ್ಲಿ ಎಷ್ಟು ಸಲ ಕೇಳಿದರೂ ಸ್ವಲ್ಪವೂ ಬೇಸರವಿಲ್ಲದೆ ಹೇಳಿಕೊಡುತ್ತಿದ್ದರು. ನನಗೆ ಇತಿಹಾಸ, ರಾಜಕಾರಣ ಗೊತ್ತಾಗದಿದ್ದರೆ ಅವರನ್ನು ಕೇಳುತ್ತಿದ್ದೆ. ಅದನ್ನೂ ವಿವರವಾಗಿ ಹೇಳಿಕೊಡುತ್ತಿದ್ದರು. ಅದೇ ಕಚೇರಿಯಲ್ಲಿ ರವಿ ಸಹ ಇದ್ದ.

ರವಿ ಹಾಗೂ ನನಗಿಂತ ಹರೀಶ್ ಅವರು ವಯಸ್ಸಿನಲ್ಲಿ ದೊಡ್ಡವರು. ಜೀವನದ ಬಂಡಿ ಸಾಗಿಸಲು ಅವರು ಪಡುತ್ತಿದ್ದ ಕಷ್ಟ ನಮ್ಮೆಲ್ಲರಿಗೂ ಗೊತ್ತಿತ್ತು. ಬೆಂಗಳೂರಿನಲ್ಲಿ ವ್ಯಂಗ್ಯಚಿತ್ರಕಾರರೂ, ಪಾಕ್ಷಿಕ ಪತ್ರಿಕೆಯೊಂದರ ಸಂಪಾದಕರೂ ಆಗಿರುವ ಸತೀಶ್ ಬಾಬು ನಮಗೆಲ್ಲಾ ಮುಖ್ಯಸ್ಥರಾಗಿದ್ದರು.

ಹರೀಶ್ ಅವರು ಮೂಲತಃ ಚಾಮರಾಜನಗರದವರಾಗಿದ್ದರೂ ಚಿಕ್ಕಂದಿನಲ್ಲೇ ಮಂಡ್ಯಕ್ಕೆ ವಲಸೆ ಬಂದಿದ್ದರು. ತಂದೆ, ತಾಯಿ, ತಂಗಿಯುಳ್ಳ ಪುಟ್ಟ ಕುಟುಂಬ. ಅಕಾಲದಲ್ಲಿ ತಾಯಿ ತೀರಿಕೊಂಡರು. ತಂದೆ ಎಲ್ಲಿಗೋ ಹೋದರು. ಅಷ್ಟರಲ್ಲಿ ತಂಗಿ ಮದುವೆಯಾಗಿತ್ತು. ತಂಗಿಯ ಗಂಡ ಬೇರೆಲ್ಲೋ ಕೆಲಸ ಮಾಡುತ್ತಿದ್ದುದರಿಂದ ಅವರ ತಂಗಿ ಹರೀಶ್ ಮನೆಯಲ್ಲಿ ಉಳಿದುಕೊಂಡಿದ್ದರು. ಅವರ ಮಕ್ಕಳ ವಿದ್ಯಾಭ್ಯಾಸ, ಮನೆಯ ನಿತ್ಯ ಖರ್ಚು ಎಲ್ಲವನ್ನೂ ಹರೀಶ್ ನೋಡಿಕೊಳ್ಳುತ್ತಿದ್ದರು. ಅವರಿಗೆ ಬರುತ್ತಿದ್ದ ಸಂಬಳ ಕೇವಲ 2500 ರುಪಾಯಿ.

ಬದುಕುವುದಕ್ಕೆ ಬೇಕಾದ ಉತ್ಸಾಹ, ಲವಲವಿಕೆ ಹರೀಶ್ ಅವರನ್ನು ನೋಡಿದರೆ ನಮಗೆ ಸಿಗುತ್ತಿತ್ತು. ಅವರು ಕಷ್ಟಪಟ್ಟು ದುಡಿಯುತ್ತಾರೆ, ಮೋಸ ಮಾಡಬೇಕೆಂಬ ಭಾವನೆ ಅವರಿಗಿಲ್ಲ. ದುರಹಂಕಾರ ಮೊದಲೇ ಇಲ್ಲ. ಬಂದ ಸಣ್ಣ ಕಾಸಿನಲ್ಲೇ ಜೀವನ ನಡೆಸುತ್ತಿದ್ದರೂ, ಯಾರಿಗೂ ತಮ್ಮ ಕಷ್ಟ ಹೇಳಿಕೊಳ್ಳುತ್ತಿರಲಿಲ್ಲ.

ಒಂದು ದಿನ ನಮ್ಮ ಸಂಪಾದಕರಾಗಿದ್ದ ಎಸ್.ಕೆ. ರಾಮಣ್ಣನವರ ಹತ್ಯೆಯಾಯಿತು. ಪತ್ರಿಕೆಯ ಜವಾಬ್ದಾರಿಯನ್ನು ರಾಮಣ್ಣ ಅವರ ಸೋದರ ಶಂಕರೇಗೌಡರು ವಹಿಸಿಕೊಂಡರು. ಸ್ವಲ್ಪ ದಿನ ಕೆಲಸ ಮಾಡುವಷ್ಟರಲ್ಲಿ ನಾವೆಲ್ಲ ಉದ್ಯೋಗ ಅರಸಿ ದೂರವಾಗಬೇಕಾಯಿತು. ಅಷ್ಟರಲ್ಲಿ ಹರೀಶ್ ಅವರ ವಿವಾಹವೂ ಆಯಿತು. ಕೆಲವೇ ದಿನಗಳಲ್ಲಿ ರವಿ ತಂದೆಯೂ ತೀರಿಕೊಂಡರು. ಅವರು ಸರ್ಕಾರಿ ಹುದ್ದೆಯಲ್ಲಿದ್ದುದರಿಂದ ತಂದೆಯ ಕೆಲಸ ರವಿಗೆ ಸಿಕ್ಕಿತು. ಈಗ ಆತ ಹುಣಸೂರಿನಲ್ಲಿದ್ದಾನೆ.

ನಾನು ಬೆಂಗಳೂರಿನತ್ತ ಬಂದೆ. ಹರೀಶ್ ಮಂಡ್ಯದಲ್ಲೇ ಒಂದು ಕಂಪ್ಯೂಟರ್ ಅಂಗಡಿಗೆ ಸೇರಿಕೊಂಡರು. ಬೆಳಗ್ಗೆ ಹೋಗಿ ರಾತ್ರಿ ಮನೆಗೆ ಬರುತ್ತಿದ್ದ ಅವರಿಗೆ ಮೊದಲು 3000, ಈಗ 4000 ರು. ಸಂಬಳ ಸಿಗುತ್ತಿದೆ. ಅಷ್ಟರಲ್ಲೇ ಅವರು ಜೀವನ ಸಾಗಿಸುತ್ತಿದ್ದಾರೆ.

ಅವರ ಸಂಬಂಧಿಕರ ಹುಡುಗರು ದುಬೈನಲ್ಲಿದ್ದಾರೆ. ಅವರು ಹರೀಶ್ ಅವರಿಗೆ ಅಲ್ಲಿ ಕೆಲಸ ನೋಡಿದ್ದಾರೆ. ಪಾಸ್ ಪೋರ್ಟ್ ಸಹ ಆಗಿದೆ. ಬೇರೆ ಕೆಲಸಕ್ಕೆ ಹೋಗುತ್ತಿರುವುದಾಗಿ ಹೇಳಿದರೆ ಇಷ್ಟು ವರ್ಷ ಕೆಲಸ ಕೊಟ್ಟಿದ್ದ ಅಂಗಡಿ ಮಾಲೀಕರಿಗೆ ಕೈಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಮುಗ್ಧತನದಿಂದ ಕೇಳುತ್ತಿದ್ದಾರೆ ಹರೀಶ್. ಹರೀಶ್ ಅವರಿಗೆ ಹಲವು ಮಂದಿ ಪರಿಚಯ ಇದ್ದಾರೆ. ಅದನ್ನು ಬಳಸಿ ಮಂಡ್ಯದಲ್ಲೇ ಒಂದು ಕಂಪ್ಯೂಟರ್ ಅಂಗಡಿ ಹಾಕಿಕೊಳ್ಳಿ ಎಂದು ಸ್ನೇಹಿತರೆಲ್ಲಾ ಕೇಳಿಕೊಂಡೆವು. ಆದರೆ ಅವರು ಕೇಳಲಿಲ್ಲ. ನನಗೆ ಕೆಲಸ ಕೊಟ್ಟವರಿಗೆ ಪ್ರತಿಸ್ಪರ್ಥಿಯಾಗಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿದರು.

ಈಗ ದುಬೈಗೆ ಹೋಗಲು ಅವರಿಗೆ ಕಾಡುತ್ತಿರುವ ಮತ್ತೊಂದು ಕೊರಗು- ಎರಡು ಪುಟ್ಟ ಮಕ್ಕಳಿರುವ ಕುಟುಂಬ ಬಿಟ್ಟು ಹೋಗಬೇಕಲ್ಲ ಎಂಬುದು.

ಕಳೆದ ವಾರ ಮಂಡ್ಯಕ್ಕೆ ಹೋಗಿದ್ದಾಗ ಹರೀಶ್ ಅವರ ಕೊರಗು ಕೇಳಿ ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಮುಂದಿನ ಸಾರಿ ಹೋದಾಗ ಅವರು ಏನು ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ಮರೆಯದೇ ಕೇಳಬೇಕು ಅಂದುಕೊಂಡಿದ್ದೇನೆ.

YIELDನಿಂದ ಹೆಚ್ಚಿನ YIELD

ಕೆಲ ತಿಂಗಳ ಹಿಂದೆ ಬೆಂಗಳೂರಿನ ರಾಜಾಜಿನಗರ ಕಡೆಯಿಂದ ಬಿಎಂಟಿಸಿ ಬಸ್ ನಲ್ಲಿ ಶಿವಾಜಿನಗರಕ್ಕೆ ಬರುವುದೆಂದರೆ ಯಮಯಾತನೆ. ಅರ್ಧಗಂಟೆಯಲ್ಲಿ ಶಿವಾಜಿನಗರಕ್ಕೆ ಬರುತ್ತೇನೆ ಎಂದು ಸ್ನೇಹಿತನಿಗೆ ಹೇಳಿ ರಾಜಾಜಿನಗರದ ನವರಂಗ್ ಬಳಿ ಬಸ್ ಹತ್ತಿದರೆ ಶಿವಾಜಿನಗರಕ್ಕೆ ಬರುವಷ್ಟರಲ್ಲಿ ಒಂದೂವರೆ ಗಂಟೆಯೇ ಆಗುತ್ತಿತ್ತು. ಸಂಜೆ ಹೊತ್ತಂತೂ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ. ಬಸ್ಸಲ್ಲಿ ಸೀಟು ಹಿಡಿದರೆ ಯಾವುದೋ ಸಾಮ್ರಾಜ್ಯವನ್ನೇ ಗೆದ್ದಂತ ಅನುಭವ. ಸೀಟು ಸಿಗದೆ ನಿಂತುಕೊಂಡು ಪ್ರಯಾಣಿಸಿದರಂತೂ ಮುಗಿಯಿತು ಕತೆ. ಒಂದೂವರೆ ಗಂಟೆ ಉಸಿರಾಡಲೂ ಹೆಣಗಾಡುತ್ತಾ, ಪಕ್ಕದಲ್ಲಿ ನಿಂತವರ ಮೇಲೆ ಬೀಳುತ್ತಾ ಬರಬೇಕಿತ್ತು.

ಆದರೆ, ಈಗ ಹಾಗಾಗುತ್ತಿಲ್ಲ. ಅದಕ್ಕೆ ಕಾರಣ ಎರಡು.

1. ಬಾಲಬ್ರೂಯಿ ಅತಿಥಿಗೃಹದ ಬಳಿ ಸಂಚಾರಿ ಪೊಲೀಸರು ಸಿಗ್ನಲ್ ತೆಗೆದಿದ್ದಾರೆ. YIELD ಎಂಬ ಫಲಕ ಹಾಕಿದ್ದಾರೆ. ಫಲಕ ಹಾಕಿದಾಕ್ಷಣ ಸಂಚಾರ ನಿಯಂತ್ರಣಕ್ಕೆ ಬರುವುದಿಲ್ಲ. ಬೇಕಿದ್ದರೆ ನಿಧಾನವಾಗಿ ಚಲಿಸಿ ಎಂಬ ಬೋರ್ಡ್ ಹಾಕಿರುವ ಕಡೆ ನೋಡಿ- ಬಹುತೇಕ ಮಂದಿ ವೇಗವಾಗಿಯೇ ಹೋಗುತ್ತಿರುತ್ತಾರೆ. ಆದರೆ ಇಲ್ಲಿ ಹಾಗಾಗಿಲ್ಲ. ನಮ್ಮ ರಾಜ್ಯದ ಮಟ್ಟಿಗೆ ಇದೊಂದು ಹೊಸ ಐಡಿಯಾ. ಮಾಮೂಲಿ ಸಿಗ್ನಲ್ ಗೂ ಈ ವ್ಯವಸ್ಥೆಗೂ ಭಾರಿ ವ್ಯತ್ಯಾಸವಿದೆ. YIELDನ ಏಕಮೇವ ಉದ್ದೇಶ- ಬೇಗ ಬಂದವರಿಗೆ ದಾರಿ. ತುಸು ಲೇಟಾಗಿ ಬಂದವರು ಸ್ವಲ್ಪ ಕಾಯಬೇಕು. ಅಮೆರಿಕ, ಕೆನಡಾ, ಬ್ರಿಟನ್ ನ ಹಲವು ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಹಿಟ್ ಆಗಿದೆ. ಬಾಲಬ್ರೂಯಿ ಅತಿಥಿಗೃಹದ ಬಳಿ ಜಾರಿಗೆ ತಂದಿರುವ YIELD ವ್ಯವಸ್ಥೆಯೂ ಯಶಸ್ವಿಯಾಗಿದೆ. ಬಸವೇಶ್ವರ ವೃತ್ತದ ಸಿಗ್ನಲ್ ದಾಟಿ ಬಂದ ಬಳಿಕವೂ ಕೆಲ ನಿಮಿಷ ಬಾಲಬ್ರೂಯಿ ಸಿಗ್ನಲ್ ನಲ್ಲಿ ವಾಹನಗಳು ನಿಲ್ಲಬೇಕಾದ ಪರಿಸ್ಥಿತಿ ಕೆಲ ತಿಂಗಳ ಹಿಂದೆ ಇತ್ತು. ಈಗ ಅದು ತಪ್ಪಿದೆ. ಬಸವೇಶ್ವರ ಸಿಗ್ನಲ್ ದಾಟಿದ ಬಳಿಕ ವೃತ್ತಾಕಾರದಲ್ಲಿ ಸುತ್ತಿ ವಾಹನಗಳು ಮುಂದೆ ಹೋಗುತ್ತಿವೆ. ಬಸವೇಶ್ವರ ವೃತ್ತದಿಂದ ಹೋಗುವ ವಾಹನಗಳು ಬೇಗ ಹೋದರೆ ಬೇಗ ರಸ್ತೆ ದಾಟಬಹುದು. ಇಲ್ಲ ತುಸು ಹೊತ್ತು ಕಾದು, ವಿಮಾನ ನಿಲ್ದಾಣ ರಸ್ತೆಯಿಂದ ಬರುವ ವಾಹನಗಳು ಹೋದ ನಂತರ ಚಲಿಸಬೇಕು. ಹೀಗಾಗಿ ವಾಹನಗಳು ಇಲ್ಲದಿದ್ದರೂ ಸಿಗ್ನಲ್ ಕೆಂಪು ಬಣಕ್ಕೆ ತಿರುಗುವವರೆಗೂ ಕಾಯುತ್ತಾ ನಿಲ್ಲುವುದು ತಪ್ಪುತ್ತದೆ.

2. ರೇಸ್ ಕೋರ್ಸ್ ರಸ್ತೆ ಅಗಲಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಹೀಗಾಗಿ ಈ ಹಿಂದಿನಂತೆ ಇಲ್ಲಿ ಹೆಚ್ಚು ಹೊತ್ತು ನಿಲ್ಲಬೇಕಿಲ್ಲ. ಬೇಗನೆ ಮುಂದೆ ಹೋಗಬಹುದು. ಈ ರಸ್ತೆ ಕಾಮಗಾರಿಯೂ ಮುಗಿದರೆ ಶಿವಾಜಿ ನಗರಕ್ಕೆ ಬರುವುದು ಸಲೀಸು. ಆದರೆ ವಸಂತನಗರ ಬಳಸಿ ಬರಬೇಕಲ್ಲ ಎಂಬುದೇ ಬೇಜಾರು.